Skip to content

ಚಂಪಾರ ಅಧಃಪತನ

ಕರ್ನಾಟಕದ ಬುದ್ಧಿಜೀವಿಗಳು ಒಬ್ಬರಾದ ಮೇಲೊಬ್ಬರು ತಮ್ಮ ಆದರ್ಶ-ನಂಬಿಕೆಗಳಿಗೆ ಸಾರ್ವಜನಿಕವಾಗಿ ರಾಜೀನಾಮೆ ಕೊಡುತ್ತ ಬರುತ್ತಿರುವುದು ಒಂದೆಡೆ ತಮಾಷೆಯಾಗಿ ಕಂಡರೂ, ನಾಡಿನ ಹಿತದೃಷ್ಟಿ-ಭವಿಷ್ಯ ಗಮನಿಸಿದಾಗ ದುರಂತಮಯವೆಂದೇ ಹೇಳಬೇಕು. 

ನಿನ್ನೆಯ ಪ್ರಜಾವಾಣಿಯಲ್ಲಿ ಚಂಪಾರ ಹೇಳಿಕೆಯನ್ನುಗಮನಿಸಿ.

ರಾಜ್ ಠಾಕ್ರೆಯನ್ನು ತಮ್ಮ ಆದರ್ಶವಾಗಿಸಿಕೊಂಡು, ಭಾಷಾ ಚಳುವಳಿಯನ್ನು ಕನ್ನಡಿಗರು ಪ್ರಾರಂಭಿಸಬೇಕೆನ್ನುವುದು ಚಿದಾನಂದಮೂರ್ತಿಯವರಿಂದ ನಾವು ನಿರೀಕ್ಷಿಸಬಹುದಾದ ಸಲಹೆ. ಬಿಡಿ. ಕುವೆಂಪು, ತೀನಂಶ್ರೀ ಮತ್ತಿತರರಿಂದ ಕಲಿತದದ್ದನ್ನು ಚಿಮೂ ಮರೆತು ಹಲವು ದಶಕಗಳೇ ಕಳೆದಿವೆ.

ಗೂಟದ ಕಾರು ಮತ್ತು ಅಧಿಕಾರದ ಹಿಂದೆ ಬಹಳ ದಿನಗಳಿಂದ ಚಂಪಾ ಚಕ್ಕರ್ ಹೊಡೆಯುತ್ತಿದ್ದರೂ, ಸಮಾಜವಾದ ಹಾಗು ಪ್ರಗತಿಪರ ಹೋರಾಟಗಳ ಸಂಸ್ಕಾರ ಸ್ವಲ್ಪವಾದರೂ ಇರಬಹದು ಎಂಬ ಆಸೆ ಮನಸಿನ ಮೂಲೆಯಲ್ಲೆಲ್ಲೊ ಇತ್ತು. ಆ ಆಶಯ ಜೆಪಿ ಶಿಷ್ಯರು ಠಾಕ್ರೆ ಪರಿವಾರದ ಸದಸ್ಯರೆಂದೂ ಅಗರು ಎಂಬ ಸಾರ್ವತ್ರಿಕ ನಂಬಿಕೆಯನ್ನು ಆಧರಿಸಿತ್ತು.

ಆದರೆ ಇದು ಸಾರ್ವತ್ರಿಕ ನಂಬಿಕೆಗಳ ಕಾಲವಲ್ಲ. ಅನುಕೂಲಸಿಂಧುತ್ವದ್ದು. ಹಾಗಾಗಿ ಚಂಪಾರ ನಡವಳಿಕೆ ಅಚ್ಚರಿ ಮೂಡಿಸುತ್ತಿಲ್ಲ.

ಒಂದು ಪ್ರಶ್ನೆಯನ್ನು ಮಾತ್ರ ಎತ್ತಲೇಬೇಕು. ಚಂಪಾ ಹೇಳುತ್ತಾರೆ: ವಲಸಿಗರು ತಮ್ಮ ಭಾಷೆ ಉಳಿಸಿಕೊಳ್ಳುವ ಜೊತೆಗೆ, ಕನ್ನಡದ ನೆಲದ ಕಾನೂನನ್ನು ಪಾಲಿಸಬೇಕೆಂದು.

ಈ ಕನ್ನಡ ನೆಲದ ವಿಶೇಷ ಕಾನೂನು ಯಾವುದು? ಇದು ಸಂವಿಧಾನದಲ್ಲಿ ಇದೆಯೇ? ಅಥವಾ ಸರ್ಕಾರದ ಅಧಿಸೂಚನೆಗಳಲ್ಲಿ ಇದೆಯೇ? ಈ ಪ್ರಶ್ನೆಗಳನ್ನ ಕನ್ನಡಿಗನಾಗಿ ನಾವು ಎತ್ತಬೇಕು. ಇಲ್ಲದಿದ್ದರೆ ಮುಂಬೈನಲ್ಲಿ ಶಿವಸೇನೆ ಹುಟ್ಟುಹಾಕಿರುವ ಫಾಶಿಸ್ಟ್ ಮನೋಭಾವ ಕರ್ನಾಟಕದಲ್ಲೂ ಸರ್ವೇಸಾಮಾನ್ಯವಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಚಂಪಾರ ಸಾಧನೆಗಳನ್ನು ಗಮನಿಸಿದರೆ, ಹೊಟೆಲ್ ಉದ್ಯಮಿ ಹರಿಕೃಷ್ಣ ಪುನರೂರರೇ ವಾಸಿ ಎನ್ನಿಸುವಂತಾಗಿದೆ. ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ, ಚಾಮರಾಜಪೇಟೆಯ ಕಸಾಪ ಕಛೇರಿಗೆ ಒಮ್ಮೆ ಹೋಗಿ. ಅಲ್ಲಿನ ಪುಸ್ತಕಭಂಡಾರವನ್ನು ಒಮ್ಮೆ ಗಮನಿಸಿ. ರದ್ದಿ ಅಂಗಡಿ ಮಾಲೀಕ ತನ್ನ ಮಾಲಿನ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಾನೆ. ಅಲ್ಲೊಂದು ಕಂಪ್ಯೂಟರ್ ಕಾಣುವುದಿಲ್ಲ. ನಂತರ ರೇಸ್‍ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಪುಸ್ತಕಮಳಿಗೆಗೆ ಭೇಟಿ ನೀಡಿ ಹೋಲಿಕೆ ಮಾಡಿ ನೋಡಿ.

ನಿನೆ ಪ್ರಜಾವಾಣಿ ವರದಿ ಓದಿದ ನಂತರ, ನನಗೆ ನೆನಪಾದದ್ದು ೭೦ರ ದಶಕದ ಕವಿ-ಸಂಕ್ರಮಣದ ಸಂಪಾದಕ ಚಂಪಾ.

ಆ ಚಂಪಾರ ಮೊನುಚು ವ್ಯಂಗ್ಯದ ಕವಿವಾಣಿಗೆ ಇಂದಿನ ಚಂಪಾ ಒಂದೇ ಒಂದು ಬಾರಿ ಸಿಕ್ಕಿದರೂ ಸಾಕು.

ಹಾಗಾಗುವುದು ಡೌಟ್ ಬಿಡಿ.

 

Post a Comment

You must be logged in to post a comment.