Skip to content

ಮಾನಸರಿಗೊಂದು ಬಹಿರಂಗ ಪತ್ರ

ಶ್ರೀ ಮಾನಸ ಅವರೆ,

ನಾನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ವೃತ್ತಿಪರ ವಿದ್ಯಾರ್ಥಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ. ಈ ಎರಡೂ ಕಾರಣಗಳಿಂದ, ತಾವು ಕನ್ನಡ ಸಾಹಿತ್ಯ ಪರಿಷತ್‍ನ  ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕನ್ನಡ ವಿಮರ್ಶಕ ಜಿ ಹೆಚ್ ನಾಯಕರಿಗೆ ಬರೆದ ಬಹಿರಂಗ ಪತ್ರ ಕುರಿತಂತೆ ನನ್ನ ಭಿನ್ನಮತವನ್ನು ಸಾರ್ವಜನಿಕವಾಗಿ ದಾಖಲಿಸಬೇಕೆಂದು ಈ ಪತ್ರವನ್ನು ಬರೆಯುತ್ತಿದ್ದೇನೆ.

ಕಳೆದ ವಾರ ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲರು ತಮ್ಮ ಹೊಸ ಆದರ್ಶವಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸ್ಥಾಪಕ ರಾಜ್ ಠಾಕ್ರೆ ಹಾಗು ಅವರ ಉತ್ತರಭಾರತೀಯರ ವಿರುದ್ಧದ ‘ಉಗ್ರ’ ಹೋರಾಟವನ್ನು ಒಪ್ಪಿಕೊಂಡಿದ್ದಲ್ಲದೆ, ಕನ್ನಡ ನಾಡು್-ನುಡಿ ಉಳಿಸಲು ಅದೇ ಮಾದರಿಯ ಚಳವಳಿ ಅಗತ್ಯ ಎಂದದ್ದು ನನಗೆ ಗಾಬರಿ ಮೂಡಿಸಿತ್ತು. ಅಸಹನೆ ಮತ್ತು ಅತಂಕಗಳನ್ನೇ ಕೇಂದ್ರವಾಗಿರಿಸಿಕೊಂಡ ರಾಜಕೀಯ ಜೀವವಿರೋಧಿ. ಆ ಮಾದರಿಯ ರಾಜಕೀಯ ಭಾಷೆ-ಸಂಸ್ಕೃತಿ ಉಳಿಸಿ ಬೆಳಸುವ ಪ್ರಕ್ರಿಯೆಯಲ್ಲಿ ಸೃಜನಾತ್ಮಕವಾದ ಪಾತ್ರ ವಹಿಸಲಾರದು ಎಂಬುದನ್ನು ಮರೆತ ಚಂಪಾರಿಂದ ಮತ್ತೇನನ್ನೂ ನಾವು ನಿರೀಕ್ಷಿಸಲಾಗದು.

ಇತ್ತೀಚಿನ ವರ್ಷಗಳಲ್ಲಿ ತಮ್ಮ ಬಂಡಾಯದ ಬೇರುಗಳನ್ನು ಕಿತ್ತುಹಾಕಿ, ಅಧಿಕಾರ-ಸವಲತ್ತು-ಗೂಟದ ಕಾರುಗಳ ಹಿಂದೆ  ಬಿದ್ದಿರುವ ಚಂಪಾ ಒಂದು ವಾರದೊಳಗೆ ಕಸಾಪದ ಜಿಲ್ಲಾ ಘಟಕಗಳ ಅಧ್ಯಕ್ಷರುಗಳಿಗೂ ತಮ್ಮ ಹೊಸ ಮಾದರಿಯ ಸಾಂಸ್ಕೃತಿಕ ರಾಜಕೀಯವನ್ನು ರಪ್ತು ಮಾಡಿ ಬಿಡುವರು ಎಂದುಕೊಂಡಿರಲಿಲ್ಲ. 

ಆದರೆ ನನಗೆ ಗೊತ್ತಿರುವ ಸತ್ಯ ಮಾತ್ರ ಇದು: ಅಸಹನೆ ಪ್ರಜಾಸತ್ತಾತ್ಮಕ ಮೌಲ್ಯವಲ್ಲ ಹಾಗು ಒಮ್ಮೆ ಅದನ್ನು ಆದರ್ಶವಾಗಿ ಸ್ವೀಕರಿಸಿದ ನಂತರ, ಅದು ಹೊರಗಿನವರ ವಿರುದ್ಧ ಮಾತ್ರವೇ ಹೊರಬರದು. ಭಿನ್ನಮತ ವ್ಯಕ್ತ ಪಡಿಸುವ ಕನ್ನಡಿಗರೂ ಸಹ ಅಸಹನೆಯ ಬಲಿಯಾಗುವುದು ಸರ್ವೆಸಾಮಾನ್ಯವಾಗಿಬಿಡುತ್ತದೆ.

ತಾವು ಸಂಘಟಿಸಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿ ಹೆಚ್ ನಾಯಕರ ಅಭಿಪ್ರಾಯಗಳು ನಿಮ್ಮ ಮೇಲಿನ ವೈಯಕ್ತಿಕ ಹಾಗು ಖಾಸಗಿ ಬದುಕಿಗೆ ಸಂಬಂಧಿಸಿದ ಟೀಕೆಗಳಲ್ಲ ಎಂದು ನೀವು ಅರಿಯಬೇಕಿತ್ತು. ಸಮ್ಮೇಳನಕ್ಕೆ ಮೈಸೂರಿನ ಹಿರಿಯ ಬರಹಗಾರರನ್ನು, ಅದರಲ್ಲೂ ಹಿಂದೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರನ್ನು ಗೌರವ ತೋರಿಸಿ ಆಹ್ವಾನಿಸದಿರುವುದು ನಿಮಗೆ ಹೆಗ್ಗಳಿಕೆ ತರುವ ವಿಷಯವಲ್ಲ. ಜೊತೆಗೆ ಕಸಾಪ ಕನ್ನಡಿಗರೆಲ್ಲರಿಗೂ ಸೇರಿದ್ದು. ಹಾಗಾಗಿ ಮಠ-ಜಾತಿ ಸಂಘಗಳಿಂದ ದೂರ ಉಳಿಯವುದು ಉಚಿತ ಎಂಬ ನಾಯಕರ ಅಭಿಪ್ರಾಯ ಅಂತಹ ಸಮಸ್ಯಾತ್ಮಕ ನಿಲುವೇನೂ ಅಲ್ಲ.    

ಮೇಲಾಗಿ ಮೈಸೂರು ಜಿಲ್ಲಾ ಕಸಾಪದ ಕಾರ್ಯವೈಖರಿ ಮತ್ತು ಸಮ್ಮೇಳನ ಸಂಘಟನೆಗೆ ಸಂಬಂಧಿಸಿದಂತೆ, ನಮ್ಮ ನಡುವಿನ ಹಿರಿಯರು ಎರಡು ಹಿತವಚನಗಳನ್ನು ನುಡಿದರೆ, ಅದನ್ನು ಕೇಳಿ ಸೃಜನಾತ್ಮಕವಾಗಿ ಪ್ರತಿಕ್ರಿಯಿಸುವ ಸೌಜನ್ಯ ತೋರದಿರುವುದು ಕಸಾಪದ ಪದಾಧಿಕಾರಿಗಳಿಗೆ ಗೌರವ ತರುವ ವಿಷಯವಲ್ಲ.

ಈ ಹಿನ್ನೆಲೆಯಲ್ಲಿ ಜಿ ಹೆಚ್ ನಾಯಕರ ಮೇಲಿನ ತಮ್ಮ ಹೇಳಿಕೆಗಳು ನಿಮಗಾಗಲಿ, ನೀವು ಪ್ರತಿನಿಧಿಸುವ ನಮ್ಮೆಲ್ಲರ ಕಸಾಪಗಾಗಲಿ ಗೌರವ ತರದು. ಕನ್ನಡ ಬರಹಗಾರ-ಚಿಂತಕರೊಬ್ಬರನ್ನು, ಅವರು ಯಾರೇ ಇರಲಿ, ಕರ್ನಾಟಕದಲ್ಲೆಲ್ಲೂ ಮಾತನಾಡಲು ಬಿಡುವುದಿಲ್ಲ, ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುತ್ತೇವೆ ಎಂದು ಕಸಾಪದ ಪದಾಧಿಕಾರಿಯೊಬ್ಬರು ಹೇಳುವುದು ಒಂದು ದುರಂತವೇ ಸರಿ. ವಿಚಾರ ವಿನಿಮಯವನ್ನು ಸುಗಮಗೊಳಿಸುವುದು ನಿಮ್ಮ ಜವಾಬ್ದಾರಿ, ಅಡಚಣೆ ಒಡ್ಡುವುದಲ್ಲ.

ಮೇಲಾಗಿ, ಶ್ರೀ ನಾಯಕರ ಕೊಡುಗೆಗಳ ಬಗೆಗಿನ ತಮ್ಮ ಮಾತುಗಳು ಸಂಸ್ಕೃತಿ ಕಟ್ಟುವ ಕೆಲಸ ಹಾಗು ಅದರ ಸ್ವರೂಪದ ಬಗ್ಗೆ ನಿಮ್ಮ ಚಿಂತನೆ-ಪರಿಕಲ್ಪನೆಗಳ ಮಿತಿಗಳನ್ನೇ ತೋರುತ್ತವೆ.

ಜಿ ಹೆಚ್ ನಾಯಕರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ವಿಮರ್ಶಕರಲ್ಲೊಬ್ಬರು. ಜೊತೆಗೆ, ಕನ್ನಡ ನಾಡು, ಭಾಷೆ, ಸಂಸ್ಕ್ರೃತಿ, ಸಾಮಾಜಿಕ ಚಳವಳಿ ಹಾಗು ಪ್ರಸಕ್ತ ರಾಜಕೀಯ ಸವಾಲುಗಳ ಬಗ್ಗೆ ಕಳೆದ ಅರ್ಧ ಶತಮಾನದುದ್ದಕ್ಕೂ ರಚನಾತ್ಮಕವಾಗಿ ಪ್ರಾಮಾಣಿಕಯಿಂದ ಪ್ರತಿಕ್ರಿಯಿಸುತ್ತ ಬಂದಿರುವ ನಮ್ಮ ನಡುವಿನ ಅಪರೂಪದ ಚೇತನ. ಶ್ರೀ ನಾಯಕರ ಹೆಗ್ಗಳಿಕೆ ಅವರು ಬರೆದ ಪುಸ್ತಕಗಳನ್ನು, ಅವರ ಪಾಂಡಿತ್ಯವನ್ನು ಮೀರಿದ್ದು ಹಾಗು ನಿಮ್ಮ ಪ್ರತಿಕ್ರಿಯೆಯನ್ನೇ ನೋಡಿ ಹೇಳುವುದಾದರೆ, ನಿಮ್ಮ ಅರಿವನಾಚೆಯದ್ದು.

ಜಿ ಹೆಚ್ ನಾಯಕರ ಹೆಗ್ಗಳಿಕೆ ಅವರ ಬದುಕಿನ ಶುದ್ಧತೆ. ವಿಧಾನಪರಿಷತ್ ಸದಸ್ಯತ್ವ ಹಾಗು ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನಗಳ ಹಿಂದೆ ಬೀಳುವ ತಮ್ಮ ಸಮಕಾಲೀನ ಕನ್ನಡ ಬರಹಗಾರ ಸ್ನೇಹಿತರ ನಡುವೆ, ಶ್ರೀ ನಾಯಕರು ಈ ಪದವಿಗಳನ್ನಲಂಕರಿಸಲು ಆಹ್ವಾನ ಬಂದಾಗಲೂ, ತಮ್ಮ ನಂಬಿಕೆ-ಆದರ್ಶಗಳನ್ನೆಂದೂ ಬಿಟ್ಟಿಲ್ಲ ಹಾಗು ಹಣ-ಅಧಿಕಾರದ ಹಿಂದೆ ಬಿದ್ದಿಲ್ಲ. ಇಂತಹ ಹಿನ್ನೆಲೆಯಲ್ಲಿ ನಾಯಕರು ಕನ್ನಡದ ಹೆಸರಿನಲ್ಲಿ ಗಳಿಸಿರುವ ಪ್ರಶಸ್ತಿಗಳ ಮೊತ್ತವೆಷ್ಟು ಹಾಗು ಅವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಪ್ರಶ್ನಿಸುವುದು ಮೂರ್ಖತನದ ಪರಮಾವಧಿಯೇ ಸರಿ.  

ಕ್ಷಮಿಸಿ. ಸ್ವಲ್ಪ ಕಠಿಣವಾದ ಮಾತನ್ನು ಹೇಳಲೇಬೇಕಾಯಿತು. ಶ್ರೀ ನಾಯಕರ ಕೊಡುಗೆ ಅವರ ಸಜ್ಜನಿಕೆ ಮತ್ತು ಸಭ್ಯತೆ. ಇಂದಿನ ಅಸಹನೆಯ ಸಾಂಸ್ಕೃತಿಕ ರಾಜಕಾರಣದ ದಿನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಖಚಿತವಾಗಿ ಆದರೆ ವಿನಯವಾಗಿ ಹೇಳಬಲ್ಲವರು ಅಪರೂಪವೇ ಸರಿ. ತಮ್ಮ ಸಾಹಿತ್ಯ ವಿಮರ್ಶೆ, ಸಾಂಸ್ಕೃತಿಕ ಹಾಗು ರಾಜಕೀಯ ಬರಹಗಳು, ಸುಮಾರು ಮೂರೂವರೆ ದಶಕಗಳ ಅಧ್ಯಾಪಕ ವೃತ್ತಿ ಹಾಗು ಅರ್ಧ ಶತಮಾನಗಳ ಸಾರ್ವಜನಿಕ ಬದುಕಿನಲ್ಲಿ ನಾಯಕರು ಪ್ರಾಮಾಣಿಕತೆ, ವಿನಯ, ಸಭ್ಯತೆ, ಸಜ್ಜನಿಕೆ ಹಾಗು ಖಚಿತತೆಯನ್ನೇ ಮೆರೆದಿದ್ದಾರೆ. ಈ ಗುಣಗಳು ಕನ್ನಡಕ್ಕೆ ಅವರ ಕೊಡುಗೆ ಹಾಗು ನನಗೆ, (ನಿಮ್ಮನ್ನೂ ಸೇರಿದಂತೆ) ನನ್ನಂತಹ ಸಾವಿರಾರು ಕಿರಿಯರಿಗೆ ಅವರ ಬಳುವಳಿ. ಇದನ್ನು ಗುರುತಿಸುವ ಗುಣ ನಿಮ್ಮಲ್ಲಿ ಮೂಡಲಿ ಎಂಬುದು ನನ್ನ ಹಾರೈಕೆ.

ಕಡೆಯದೊಂದು ಮಾತು. ನನ್ನ ಆಸಕ್ತಿ ಇರುವುದು ನಿಜವಾಗಿಯೂ ಕಸಾಪದ ಕಾರ್ಯವೈಖರಿಯ ಬಗ್ಗೆ ರಚನಾತ್ಮಕ ಪ್ರತಿಕ್ರಿಯೆ ವ್ಯಕ್ತ ಪಡಿಸುವುದರಲ್ಲಿ ಮತ್ತು ನನ್ನ ಆಶಯ ಅದರ ಪದಾಧಿಕಾರಿಗಳು ಅಸಹನೆಯ ರಾಜಕೀಯದ ವಕ್ತಾರರಾಗಬಾರದು ಎಂದು ಮಾತ್ರ. ಈ ಸಂದರ್ಭದಲ್ಲಿ ಶ್ರೀ ನಾಯಕರು ನಿಮಿತ್ತ ಮಾತ್ರ. ನೀವು ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವಿರಿ ಎಂದು ಆಶಿಸುತ್ತೇನೆ.

ನಿಮ್ಮ ವಿಶ್ವಾಸಿ

ಪೃಥ್ವಿ ದತ್ತ ಚಂದ್ರ ಶೋಭಿ

 

 

3 Comments

  1. ಪತ್ರ ಮಾಝಿಲ್ಲಾದಲ್ಲಿ ಹರಿದು ಹೋದಂತಿದೆ.

    justification ತೆಗೆದು ಹಾಕಿ. :-)

    Saturday, March 1, 2008 at 10:10 am | Permalink
  2. PDCS wrote:

    HPN, I mostly use a Mac and the only time I use a PC is when I am writing in Kannada. so I hadn’t looked at the Mozilla Firefox display on PCs. I am not sure what I need to do to fix this at my end. If I don’t figure it out, I will send you a note. thanks for bringing this to my attention.

    Saturday, March 1, 2008 at 7:35 pm | Permalink
  3. PDCS, it’s the justification. I mentioned it in earlier comment.

    Tuesday, March 4, 2008 at 4:19 pm | Permalink

Post a Comment

Your email is never published nor shared. Required fields are marked *
*
*