ಮೊನ್ನೆ ಮಿತ್ರ ರವಿ ಕೃಷ್ಣ ರೆಡ್ಡಿಯವರ ಬಗ್ಗೆ ಲಘುವಾಗಿ ಮತ್ತು ಅಸಾಂದರ್ಭಿಕವಾಗಿ ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್ ಟಿಪ್ಪಣಿಸಿರುವುದು ಗಮನಿಸಿದೆ. ರವಿ ಕೂಡ ಒಂದೆರಡು ಬಾರಿ ತಮ್ಮ ಬ್ಲಾಗ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾಗು ವಿಕ್ರಾಂತ ಕರ್ನಾಟಕದಲ್ಲಿ ರೇಶ್ಮೆಯವರು ಸಹ ಈ ಬಗ್ಗೆ ಬರೆದಿದ್ದಾರೆ.
ಭಟ್ಟರ ’ಉಗ್ರ’ಲೇಖನದ ಎರಡು ದನಿಗಳ ಬಗ್ಗೆ ಒಂದು ಟಿಪ್ಪಣಿ ಬರೆಯಬೇಕೆಂದು ಅನಿಸುತ್ತಿದೆ. ಮೊದಲಿಗೆ ನನಗೆ ಅರ್ಥವಾಗದಿರುವುದು ಒಂದು ಸರಳ ವಿಷಯ. ಇನ್ನು ಕೆಲವೇ ವಾರಗಳಲ್ಲಿ ನಮ್ಮ ಮುಂದೆ ಲೋಕಸಭಾ ಚುನಾವಣೆಗಳು ನಡೆಯುತ್ತವೆ. ಹಾಗಿರುವಾಗ ಕರ್ನಾಟಕದ ಅತಿಹೆಚ್ಚು ಪ್ರಸಾರವಿರುವ ದಿನಪತ್ರಿಕೆಯ ಸಂಪಾದಕರು ತಮ್ಮ ಓದುಗರಿಗೆ ಅವರ ಮುಂದಿರುವ ಗಂಭೀರ ಆಯ್ಕೆಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರ ಚಾರಿತ್ರ್ಯಗಳ ಬಗ್ಗೆ ಬರೆಯುವುದನ್ನು ಬಿಟ್ಟು, ಅಮೆರಿಕದಿಂದ ಬಂದ ಜನಗಳು ಮತ್ತವರ ರಾಜಕೀಯ ಭ್ರಮೆಗಳ ಬಗ್ಗೆ ಏಕೆ ಬರೆಯುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗದ ವಿಷಯ. ನಮ್ಮ ವೃತ್ತಪತ್ರಿಕೆಗಳಲ್ಲಿ ಅಷ್ಟೊಂದು ಕಾಲಮ್ ಇಂಚುಗಳು ಇರುತ್ತವೆ ಅಂತ ನಾನಂದುಕೊಂಡಿಲ್ಲ.
ಅಲ್ಲದೆ ಭಟ್ಟರಿಗೆ ರಾಜಕೀಯ ಪಕ್ಷಗಳು ಹಾಗು ವ್ಯವಸ್ಥೆಯ ಹೊರಗಿನಿಂದ ಬರುವ ರವಿ ಅಥವ ಕಲ್ಮನೆಯಂತವರ ರಾಜಕೀಯ ಪ್ರವೇಶ, ಚುನಾವಣೆಪ್ರಕ್ರಿಯೆಯಲ್ಲಿ ಭಾಗವಹಿಸುವುದು ಹುಂಬತನದಂತೆ ಕಂಡರೆ ಅದನ್ನು ನೇರವಾಗಿ, ಖಚಿತತೆಯಿಂದ ಹಾಗು ಪ್ರಾಮಾಣಿಕವಾಗಿ ಒಂದೆರಡು ವಾಕ್ಯಗಳಲ್ಲಿ ಹೇಳಬಹುದಿತ್ತು. ಅದರ ಬದಲು ಭಟ್ಟರು ಬಳಸುವ ಭಾಷೆ ಅವರಿಗೂ ಹಾಗೂ ಅವರ ಪತ್ರಿಕೆಗೂ ಗೌರವ ತರುವಂತ ಬರವಣಿಗೆಯಲ್ಲ. ಇದು ನನ್ನ ಎರಡನೆಯ ಅಂಶ. ಇಲ್ಲಿ ಒಂದು ವಿಷಯವನ್ನು ಮಾತ್ರ ನಿರ್ದಾಕ್ಷಿಣ್ಯವಾಗಿ ಹೇಳಬೇಕು. ರವಿ ಹಾಗು ಕಲ್ಮನೆಯಂತಹವರ ಪ್ರಾಮಾಣಿಕತೆ ಹಾಗು ಕಾಳಜಿಗಳನ್ನು ಪ್ರಶ್ನಿಸುವುದು ಭಟ್ಟರ ಹಕ್ಕು ಹಾಗು ಅದರ ಬಗ್ಗೆ ನನ್ನ ಭಿನ್ನಾಭಿಪ್ರಾಯಗಳಿದ್ದರೆ, ನಾನಾಗಲಿ ಅಥವ ರವಿಯವರ ಇತರ ಮಿತ್ರರು ನಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತೇವೆ. ಆದರೆ ರವಿಯವರನ್ನು ಪದೆ ಪದೆ ’ಅದು’ ಎಂದು ಸಂಬೋಧಿಸುವುದು ಯಾವ ಸಂದರ್ಭದಲ್ಲಿಯೂ (ಅದರಲ್ಲೂ ಬರವಣಿಗೆಯಲ್ಲಿ) ಸಹಿಸಲು ಸಾಧ್ಯವಿಲ್ಲದ್ದು. ಇದಕ್ಕಿಂತ ಏಕವಚನ ಪ್ರಯೋಗ ಮಿಗಿಲು. ಭಟ್ಟರು ತಮ್ಮ ವರದಿಗಾರ ಮಿತ್ರರ ಮಾತುಗಳನ್ನು ನೇರವಾಗಿ ದಾಖಲಿಸುತ್ತಿದ್ದರೂ, ತಮ್ಮ ಸ್ಥಾನಗೌರವ ಹಾಗು ಹೊಣೆಗಾರಿಕೆಗಳೇನು ಎಂಬುದೇನು ಎಂಬ ಅರಿವೇಕೆ ಕಳೆದುಕೊಳ್ಳುವುದು? ನಮ್ಮ ಎದುರಾಳಿಗಳನ್ನು, ಅಭಿಪ್ರಾಯಭೇದ ಹೊಂದಿರುವವರ ಮನುಷ್ಯತ್ವವನ್ನೂ ನಿರಾಕರಿಸುವ ಮನೋಭಾವವನ್ನು ’ಪಾಶಿಸ್ಟ್’ ಅನ್ನದೆ ಇನ್ನೇನನ್ನುವುದು!
ಬಹುಶಃ ಭಟ್ಟರಿಂದ ನಾವು ಈ ಬಗೆಯ ಪತ್ರಿಕೋದ್ಯಮವನ್ನು ಮಾತ್ರ ನಿರೀಕ್ಷಿಸಬಹುದು ಎಂದು ಕಾಣುತ್ತದೆ. ಆದರೂ ಎರಡು ವಿಷಯಗಳನ್ನು ಇಲ್ಲಿ ದಾಖಲಿಸಬೇಕು. ಮೊದಲಿಗೆ ರವಿ (ಅಥವ ಕಲ್ಮನೆ) ಚುನಾವಣೆ ಸ್ಪರ್ಧಿಸುವ ಮೂಲಕ ಮತ್ತೊಂದು ಆಯ್ಕೆಯನ್ನು ಮತದಾರರ ಮುಂದೆ ಇಡುತ್ತಾರೆ. ರಾಜಕೀಯ ಯಾವಾಗಲೂ ಚುನಾವಣೆಯ ಸೋಲು-ಗೆಲುವುಗಳ ಸ್ಪರ್ಧೆ ಮಾತ್ರವಲ್ಲ. ಅದರ ಗರ್ಭದೊಳಗೆ ಸಂಕೇತಗಳಿರುತ್ತವೆ. ಹಾಗೆಯೇ ವಿಚಾರಗಳು, ಪ್ರಯೋಗಶೀಲತೆ ಮತ್ತಿತರ ಅಂಶಗಳು ಸಹ. ಪ್ರಜಾಪ್ರಭುತ್ವದಲ್ಲಿ ವಿಚಾರಗಳನ್ನು, ಆದರ್ಶಗಳನ್ನು ಮತ್ತು ಕನಸುಗಳನ್ನು ಜೀವಂತವಾಗಿಡುವ ಕೆಲಸವನ್ನು, ಮೌಲ್ಯಗಳ ಪುನರುಜ್ಜೀವನದ ಕೆಲಸವನ್ನು ಯಾರಾದರೂ ಮಾಡಲೇಬೇಕು. ಆ ಬಗೆಯ ಪ್ರಯೋಗಶೀಲತೆಯನ್ನು ಗುರುತಿಸುವ ಕೆಲಸ ಪತ್ರಕರ್ತನದು ಎಂದು ನಾನು ನಂಬಿರುವವನು. ಇದುವರಗೆ ನಾನು ಗಮನಿಸಿರುವಂತೆ ಭಟ್ಟರು ಈ ಬಗೆಯ ಪತ್ರಿಕೋದ್ಯಮ ಮಾಡಿಲ್ಲ.
ಎರಡನೆಯದಾಗಿ, ಭಟ್ಟರ ವರದಿಗಾರ ಸ್ನೇಹಿತ ಹೇಳಿರುವಂತೆ ರವಿ ’ಲೂಸ್’ ಎಂಬುದೇನೋ ನಿಜವೇ! ಇಂದಿನ ಕರ್ನಾಟಕದ ಚುನಾವಣ ಮತ್ತು ಸಾಂಸ್ಕೃತಿಕ ರಾಜಕೀಯದ ಹೊಲಸನ್ನು ಅನುಭವಿಸಿರುವ ಯಾರಿಗೆ ಆಗಲಿ, ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಉಳಿದಿದ್ದರೆ, ಅವರು ಮೌಲ್ಯಗಳು ಮತ್ತು ಕನಸುಗಳ ಬಗ್ಗೆ ಮಾತನಾಡುವವರಾಗಿ ಉಳಿದಿದ್ದರೆ, ಅವರನ್ನು ಹುಚ್ಚರೆಂದೇ ಕರೆಯಬೇಕು! ವೈಯಕ್ತಿಕವಾಗಿ ನಾನಂತೂ ಈ ಬಗೆಯ ಹುಚ್ಚರ ಸಂಪರ್ಕ, ಸ್ನೇಹವನ್ನೇ ಬಯಸುವವನು. ಭಟ್ಟರು ಕನ್ನಡ ಹಾಗು ಕರ್ನಾಟಕದ ಬಗ್ಗೆ ಕಾಳಜಿಯಿದ್ದವರಾದರೆ, ಇಂತಹ ಹುಚ್ಚರ ಸಂಖ್ಯೆ ಹೆಚ್ಚಲಿ ಎಂದು ನಮ್ಮ ಜೊತೆ ಹಾರೈಸುತ್ತಿದ್ದರು. ರವಿಯವರ ಕಾಳಜಿ ಹಾಗು ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ ಎತ್ತುತ್ತಿರಲಿಲ್ಲ. ಅಕಸ್ಮಾತ್ ರವಿಯವರ ಪ್ರಬುದ್ಧತೆಯ ಬಗ್ಗೆ ನಂಬಿಕೆ ಇರದಿದ್ದರೆ, ತಮ್ಮ ಸಂಶಯಗಳ ಬಗ್ಗೆ ಸೌಜನ್ಯ ಬಿಡದೆ ಭಟ್ಟರು ಬರೆಯುತ್ತಿದ್ದರು. ಯಾರಿಗೂ ಸಭ್ಯತೆಯ, ಸಜ್ಜನಿಕೆಯ ನಡವಳಿಕೆ ಹೇಳಿಕೊಡುವ ಜವಾಬ್ದಾರಿಯನ್ನು ನಾನೇನು ವಹಿಸಿಕೊಂಡಿಲ್ಲವಾದರೂ, ಇಂತಹ ಸಂದರ್ಭಗಳಲ್ಲಿ ಸುಮ್ಮನಿರುವುದು ಸಹ ಸರಿಯಲ್ಲವೆಂಬ ಅರಿವು ನನಗಿದೆ .
ನಾನು ಮೇಲೆ ಗುರುತಿಸಿದಂತೆ, ರವಿ ನನ್ನ ಸ್ನೇಹಿತರು. ಅವರಿಗೆ ನನ್ನ certificateನ ಅಗತ್ಯ ಇಲ್ಲ. ಇದಕ್ಕೆ ಕಾರಣ ಸರಳವಾದದ್ದು. ನಮ್ಮಿಬ್ಬರ ನಂಬಿಕೆಯೇನಂದರೆ ಪ್ರಾಮಾಣಿಕತೆ ಹಾಗು ಸಾಮಾಜಿಕ ಕಾಳಜಿ ಅಂತರ್‍ಮುಖಿ ಮೌಲ್ಯಗಳು, ನಮ್ಮೊಳಗೆ ಇರುವಂತಹವು ಮತ್ತು ನಮ್ಮಾತ್ಮಕ್ಕೆ ಮಾತ್ರ ಸಂಬಂಧಿಸಿದವು. ಸ್ನೇಹಿತರೂ ಸೇರಿದಂತೆ ಇತರರ ಮೆಚ್ಚಿಕೆಗಾಗಲಿ, ಒಪ್ಪಿಕೆಗಾಗಲಿ ಯಾರೂ ಪ್ರಾಮಾಣಿಕರಾಗಲೂ ಸಾಧ್ಯವಿಲ್ಲ. ಹಾಗಾಗಿಯೇ ಭಟ್ಟರಂತಹ ಪ್ರಭಾವಿ ಪತ್ರಕರ್ತ ರವಿಯವರಂತಹ ’ಸಾಮಾನ್ಯ’ರನ್ನು ಲೇವಡಿ ಮಾಡಿದಾಗ, ಟೀಕಾಕಾರರನ್ನು ಕಡೆಗಾಣಿಸುವುದೇ ಸೂಕ್ತ.